ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ ।
ದೇವ ಸರ್ವೇಶ ಪರಬೊಮ್ಮನೆಂದು ಜನಂ ॥
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ ।
ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ ॥ ೧ ॥ ಜೀವ ಜಡರೂಪ ಪ್ರಪಂಚವನದಾವುದೋ।
ಆವರಿಸಿಕೊಂಡುಮೊಳನೆರೆದುಮಿಹುದಂತೆ॥
ಭಾವಕೊಳಪಡದಂತೆ ಅಳತೆಗಳವಡದಂತೆ।
ಆ ವಿಶೇಷಕೆ ನಮಿಸೊ – ಮಂಕುತಿಮ್ಮ ॥ ೨ ॥ ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ।
ಮಹಿಮೆಯಿಂ ಜಗವಾಗಿ ಜೀವವೇಷದಲಿ ॥
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ।
ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ ॥ ೩ ॥ ಏನು ಜೀವನದರ್ಥ? ಏನು ಪ್ರಪಂಚಾರ್ಥ? ।
ಏನು ಜೀವಪ್ರಪಂಚಗಳ ಸಂಬಂಧ? ॥
ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? ।
ಜ್ಞಾನಪ್ರಮಾಣವೇಂ? – ಮಂಕುತಿಮ್ಮ ॥ ೪ ॥ ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ।
ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥
ಕಾವನೊರ್ವನಿರಲ್ಕೆ ಜಗದ ಕಥಯೇಕಿಂತು? ।
ಸಾವು ಹುಟ್ಟುಗಳೆನು? – ಮಂಕುತಿಮ್ಮ ॥ ೫ ॥ ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ।
ಬಗೆದು ಬಿಡಿಸುವರಾರು ಸೊಜಿಗವನಿದನು? ॥
ಜಗವ ನಿರವಿಸಿದ ಕೈಯೊದಾದೊಡೇಕಿಂತು ।
ಬಗೆಬಗೆಯ ಜೀವಗತಿ? – ಮಂಕುತಿಮ್ಮ ॥ ೬ ॥ ಬದುಕಿಗಾರ್ ನಾಯಕರು, ಏಕನೊ ಅನೇಕರೋ? ।
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ॥
ಕುದುರುವುದೆಂತು ಈಯವ್ಯವಸ್ಥ್ರೆಯ ಪಾಡು? ।
ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ ॥ ೭ ॥ ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? ।
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ॥
ಮಮತೆಯುಳ್ಳವನಾತನಾದೊಡೀ ಜೀವಗಳು ।
ಶ್ರಮಪಡುವುವೇಕಿಂತು? – ಮಂಕುತಿಮ್ಮ ॥ ೮ ॥ ಏನು ಭೈರವಲೀಲೆಯೀ ವಿಶ್ವವಿಭ್ರಮಣೆ ।
ಏನು ಭೂತಗ್ರಾಮನರ್ತನೊನ್ಮಾದ ॥
ಏನಗ್ನಿ ಗೋಳಗಳು! ಏನಂತರಾಳಗಳು! ।
ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ ॥ ೯ ॥ ಏನು ಪ್ರಪಂಚವಿದು! ಏನು ಧಾಳಾಧಾಳಿ!।
ಏನದ್ಭುತಾಪಾರಶಕ್ತಿನಿರ್ಘಾತ! ॥
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?।
ಏನರ್ಥವಿದಕೆಲ್ಲ?- ಮಂಕುತಿಮ್ಮ ॥ ೧೦ ॥ ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ।
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ॥
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ ।
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ ॥ ೧೧ ॥ ಮಾನವರೋ ದಾನವರೋ ಭೂಮಾತೆಯ ತಣಿಸೆ ।
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ ।
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ ॥ ೧೨ ॥ ಪುರುಷಸ್ವತಂತ್ರೆಯ ಪರಮಸಿದ್ಧಿಯದೇನು? ।
ಧರಣಿಗನುದಿನದ ರಕ್ತಾಭಿಷೇಚನೆಯೆ? ॥
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ।
ಪರಿಮಳವ ಸೂಸುವುದೆ? – ಮಂಕುತಿಮ್ಮ ॥ ೧೩ ॥ ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು ।
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ॥
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು ।
ಬಂದುದೀ ವೈಷಮ್ಯ? – ಮಂಕುತಿಮ್ಮ ॥ ೧೪ ॥ ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ ।
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ॥
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ।
ತಳಮಳಿಸುತಿದೆ ಲೋಕ – ಮಂಕುತಿಮ್ಮ ॥ ೧೫ ॥ ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ ।
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ॥
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೊ? – ಮಂಕುತಿಮ್ಮ ॥ ೧೬ ॥ ತಳಮವಿದೇನಿಳೆಗೆ? ದೇವದನುಜರ್ಮಥಿಸೆ ।
ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ? ॥
ಹಾಳಾಹಳಾವ ಕುಡಿವ ಗಿರಿಶನಿದ್ದಿರ್ದೊಡೀ ।
ಕಳವಳವದೇತಕೆಲೋ? – ಮಂಕುತಿಮ್ಮ ॥ ೧೭ ॥ ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ ।
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ॥
ಬದುಕೇನು ಸಾವೇನು ಸೊದೆಯೇನು ವಿಷವೇನು? ।
ಉದಕಬುದ್ಬುದವೆಲ್ಲ! – ಮಂಕುತಿಮ್ಮ ॥ ೧೮ ॥ ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳದು ।
ಆಳೆನಿಪುದಂತಾಗದಿರೆ ಬರಿಯ ಹೆಂಟೆ ॥
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ ।
ಕ್ಷೇಳವೇನಮೃತವೇಂ – ಮಂಕುತಿಮ್ಮ ॥ ೧೯ ॥ ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? ।
ಚಂಡಚತುರೋಪಾಯದಿಂದಲೇನಹುದು? ॥
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು ।
ಅಂಡಲೆತವಿದಕೇನೊ? – ಮಂಕುತಿಮ್ಮ ॥ ೨೦ ॥ ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ ।
ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು ॥
ಭಿನ್ನಮಿಂತಿರೆ ವಸ್ತುಮೌಲ್ಯಹಳ ಗಣನೆಯೀ ।
ಪಣ್ಯಕ್ಕೆ ಗತಿಯೆಂತೊ? – ಮಂಕುತಿಮ್ಮ ॥ ೨೧ ॥ ಕೃತ್ರಿಮವೊ ಜಗವೆಲ್ಲ! ಸತ್ಯತೆಯದೆಲ್ಲಿಹುದೊ? ।
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ॥
ಚತ್ರವೀ ಜಗವಿದರೊಳಾರ ಗುಣವೆಂತಹುದೊ! ।
ಯಾತ್ರಿಕನೆ, ಜಾಗರಿರೊ – ಮಂಕುತಿಮ್ಮ ॥ ೨೨ ॥ ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ।
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ॥
ಮರಳಿ ಕೊರಗಾಡುವುದು ಕೆರಳುವುದು ನರಳುವುದು ।
ಇರವಿದೇನೊಣರಗಳೆ? – ಮಂಕುತಿಮ್ಮ ॥ ೨೩ ॥ ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? ।
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ॥
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ? ।
ಧರುಮವೆಲ್ಲಿದರಲ್ಲಿ? – ಮಂಕುತಿಮ್ಮ ॥ ೨೪ ॥ ಜೀವಗತಿಗೊಂದು ರೇಖಾಲೇಖವಿರಬೇಕು ।
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ॥
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? ।
ಆವುದೀ ಜಗಕಾದಿ? – ಮಂಕುತಿಮ್ಮ ॥ ೨೫ ॥ ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ ।
ಇಷ್ಟ ಮೊಹಕ ದಿವ್ಯಗುಣಗಳೊಂದು ಕಡೆ ॥
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ ।
ಕ್ಲಿಷ್ಟವೀ ಬ್ರಹ್ಮಕೃತಿ – ಮಂಕುತಿಮ್ಮ ॥ ೨೬ ॥ ಧರೆಯ ಬದುಕೇನದರ ಗುರಿಯೇನು ಫಲವೇನು? ।
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ।
ನರನು ಸಾಧಿಪುದೇನು? – ಮಂಕುತಿಮ್ಮ ॥ ೨೭ ॥ ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ- ।
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ॥
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ ।
ತೋರದಾವುದು ದಿಟವೊ – ಮಂಕುತಿಮ್ಮ ॥ ೨೮ ॥ ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ! ।
ಕರವೊಂದರಲಿ ವೇಣು, ಶಂಖವೊಂದರಲಿ! ॥
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು ।
ಒರುವನಾಡುವುದೆಂತು? – ಮಂಕುತಿಮ್ಮ ॥ ೨೯ ॥ ಬ್ರಹ್ಮವೇ ಸತ್ಯ, ಸೃಷ್ಟಿಯೆ ಮಿಥ್ಯೆಯೆನ್ನುವೊಡೆ ।
ಸಂಬಂಧವಿಲ್ಲವೇನಾ ವಿಷಯಯುಗಕೆ? ॥
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ ।
ನೆಮ್ಮುವುದದಾರನೋ? – ಮಂಕುತಿಮ್ಮ ॥ ೩೦ ॥ ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? ।
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ॥
ಅಚ್ಚರಿಯ ತಂತ್ರವಿದು; ಬ್ರಹ್ಮಸೃಷ್ಟಿಗಳೇಕೊ ।
ಮುಚ್ಚಿಹವು ಸಾಜತೆಯ – ಮಂಕುತಿಮ್ಮ ॥ ೩೧ ॥ ಪರಬೊಮ್ಮನೀ ಜಗವ ರಚಿಸಿದವನಾದೊಡದು ।
ಬರಿಯಾಟವೋ ಕನಸೊ ನಿದ್ದೆ ಕಲವರವೋ? ॥
ಮರುಳನವನಲ್ಲದೊಡೆ ನಿಯಮವೊಂದಿರಬೇಕು ।
ಗುರಿಗೊತ್ತದೇನಿಹುದೊ? – ಮಂಕುತಿಮ್ಮ ॥ ೩೨ ॥ ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ ।
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ॥
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ ।
ಗುರುವೆಂದು ಕರೆಯುವೆಯ? – ಮಂಕುತಿಮ್ಮ ॥ ೩೩ ॥ ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳಸುವೀ ।
ಸೃಷ್ಟಿಯಲಿ ತತ್ತ್ವವೆಲ್ಲಿಯೋ ಬೆದಕಿ ನರನು ॥
ಕಷ್ಟಪಡುತಿರಲೆನುವುದೋ ಬ್ರಹ್ಮವಿಧಿಯೇನೋ! ।
ಅಷ್ಟೆ ನಮ್ಮಯ ಪಾಡು? – ಮಂಕುತಿಮ್ಮ ॥ ೩೪ ॥ ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು ।
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ॥
ಅರಿತೆನಾನೆನ್ನುವಂತಾಗೆ ಕೃತಿ ಕೌಶಲದ ।
ಹಿರಿಮೆಗದು ಕುಂದಲ್ತೆ? – ಮಂಕುತಿಮ್ಮ ॥ ೩೫ ॥ ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ।
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ॥
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ ।
ಸೊಲ್ಲಿಪುದು ಸರಿಯೇನೋ? – ಮಂಕುತಿಮ್ಮ ॥ ೩೬ ॥ ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ ।
ಅವನ ವೇಷಗಳೇಕೆ ಮಾರ್ಪಡುತಲಿಹವು? ॥
ತವಕಪಡನೇತಕೋ ಕುರುಹ ತೋರಲು ನಮಗೆ ।
ಅವಿತುಕೊಂಡಿಹುದೇಕೋ? – ಮಂಕುತಿಮ್ಮ ॥ ೩೭ ॥ ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ ।
ತೋರಿಪೊಸರವಳ್ಳಿಯಂತೇನು ಬೊಮ್ಮಂ? ॥
ಪೂರ ಮೈದೋರೆನೆಂಬಾ ಕಪಟಿಯಂಶಾವ ।
ತಾರದಿಂದಾರ್ಗೇನು? – ಮಂಕುತಿಮ್ಮ ॥ ೩೮ ॥ ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ।
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ॥
ಒಸೆದೇತಕವನೀಯನೆಮಗೊಂದು ನಿಜಕುರುಹ ।
ನಿಶೆಯೊಳುಡುಕರದವೊಲು? – ಮಂಕುತಿಮ್ಮ ॥ ೩೯ ॥ ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ।
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ॥
ಮುಸುಕುಬೆಳಕೊಂದಾದ ಸಂಜೆಮಂಜೇನವನು ।
ಮಿಸುಕಿ ಸುಳಿಯುವ ಸಮಯ? – ಮಂಕುತಿಮ್ಮ ॥ ೪೦ ॥ ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ ।
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ॥
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ।
ಒದವಿಪರು ದಿಟದರಿವ – ಮಂಕುತಿಮ್ಮ ॥ ೪೧ ॥ ಆಹ! ಈ ಮೋಹಗಳೊ ನೇಹಗಳೊ ದಾಹಗಳೊ ।
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ॥
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ ।
ಈ ಹರಿಬದೊಳಗುಟ್ಟೊ? – ಮಂಕುತಿಮ್ಮ ॥ ೪೨ ॥ ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ ।
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ॥
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ।
ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ ॥ ೪೩ ॥ ಮಂದಾಕ್ಷಿ ನಮಗಿಹುದು. ಬಲುದೂರ ಸಾಗದದು ।
ಸಂದೆ ಮಸಕಿನೊಳಿಹುದು ಜೀವನದ ಪಥವು ॥
ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು ।
ಸಂದಿಯವೆ ನಮ್ಮ ಗತಿ! – ಮಂಕುತಿಮ್ಮ ॥ ೪೪ ॥ ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು ।
ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ॥
ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ ।
ಬೊಂಕುದೀವಿಗೆ ತಂಟೆ – ಮಂಕುತಿಮ್ಮ ॥ ೪೫ ॥ ಇರಲಿ ಜೀವರಹಸ್ಯವರೆಪರದೆಯೊಳಗಡಗಿ ।
ಅರಸಿ ವರಿಸುವರಾರು ಬೀದಿಬತ್ತಲಿಯ? ॥
ಅರಳಿಪುದದಡಗಿರ್ದೊಡಾಗ ನಮ್ಮದೆಗಣ್ಣ ।
ಸುರಸತೆಯ ಕುತುಕದಿಂ – ಮಂಕುತಿಮ್ಮ ॥ ೪೬ ॥ ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? ।
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ॥
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ ।
ಪರಿಕಿಸಿದೊಡದು ಲಾಭ – ಮಂಕುತಿಮ್ಮ ॥ ೪೭ ॥ ಒಂದಿಹುದುಪಾಯವೋರೊರ್ವನರೆಗಣ್ಣುಗಳು ।
ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ॥
ಒಂದುಗೂಡಿದೊಡವರ್ಗಳರಿವನೆಲ್ಲವನಾಗ ।
ಮುಂದು ಸಾಗುವೆವಿನಿತು – ಮಂಕುತಿಮ್ಮ ॥ ೪೮ ॥ ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ ।
ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ॥
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ? ।
ದಂಡವದನುಳಿದ ನುಡಿ – ಮಂಕುತಿಮ್ಮ ॥ ೪೯ ॥ ಮನೆಯೆಲ್ಲಿ ಸತ್ಯಕ್ಕೆ? ಶ್ರುತಿ ತರ್ಕಮಾತ್ರದೊಳೆ? ।
ಅನುಭವಮುಮದರೊಂದು ನೆಲೆಯಾಗದಿಹುದೇಂ? ॥
ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ ।
ಅಣಕಿಪುವು ತರ್ಕವನು – ಮಂಕುತಿಮ್ಮ ॥ ೫೦ ॥ ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ ।
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ॥
ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ ।
ಯೊಳತಂತ್ರವೊ? ನೋಡು – ಮಂಕುತಿಮ್ಮ ॥ ೫೧ ॥ ಗಗನನೀಲಿಮೆಯೆನ್ನ ಕಣ್ಗೆ ಸೊಗೆವೀವಂತೆ ।
ಮುಗಿವ ತರಣಿಯ ರಕ್ತ ಹಿತವೆನಿಸದೇಕೋ! ॥
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ ।
ಬಗೆವೆನ್ನ ಮನಸಿನೊಳೊ? – ಮಂಕುತಿಮ್ಮ ॥ ೫೨ ॥ ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ।
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು ।
ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥ ೫೩ ॥ ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ ।
ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ॥
ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ ।
ತಿಳಿಮನದೆ ನೋಳ್ಪರ್ಗೆ – ಮಂಕುತಿಮ್ಮ ॥ ೫೪ ॥ ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? ।
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ॥
ನರನುಮಂತೆಯೆ ಮನಸಿನನುಭವದಿ ಕಾಣುವನು ।
ಪರಸತ್ತ್ವಮಹಿಮೆಯನು – ಮಂಕುತಿಮ್ಮ ॥ ೫೫ ॥ ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ ।
ಭೂಲೋಕದರಚು ಕೆಳಗಿಂ ಮೂಳೆಯಳುವು ॥
ಕೇಳಬರುತೀ ಮೂರು ಕೂಗೆನ್ನ ಹೃದಯದಲಿ ।
ಮೇಳಯಿಸುತಿದೆ ಸಂತೆ – ಮಂಕುತಿಮ್ಮ ॥ ೫೬ ॥ ಆಗುಂಬೆಯಸ್ತಮಯ ದ್ರೋಣಪರ್ವತದುದಯ ।
ತ್ಯಾಗರಾಜನ ಗಾನ ವಾಲ್ಮೀಕಿ ಕವನ ॥
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ ।
ಯೋಗಪುಲಕಾಂಕುರವ? – ಮಂಕುತಿಮ್ಮ ॥ ೫೭ ॥ ಮಲೆಕಣಿವೆಗಳ ಬೆರಗು ಪ್ರಕೃತಿಕೊಪದ ಗುಡುಗು ।
ಕಳೆಯೊಲವು ನಲ್ಲೆಯ ವಿಯೊಗವಿಂತಹವು ॥
ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ ।
ನೊಳದನಿಯದೊಂದರಿಂ – ಮಂಕುತಿಮ್ಮ ॥ ೫೮ ॥ ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ ।
ಮನಗಾಣಿಸಲು ನಿನಗೆ ದೈವದದ್ಭುತವ? ॥
ಮನುಜರೊಳಗಾಗಾಗ ತೋರ್ಪ ಮಹನೀಯಗುಣ ।
ವನುವಾದ ಬೊಮ್ಮನದು – ಮಂಕುತಿಮ್ಮ ॥ ೫೯ ॥ ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ ।
ಕಾಶಿಯಾ ಶಾಸ್ತ್ರಗಳನಾಕ್ಸ್ ಫರ್ಡಿನವರು‍ ॥
ದೇಶಕಾಲವಿಭಾಗ ಮನದ ರಾಜ್ಯದೊಳಿರದು ।
ಶ್ವಾಸವದು ಬೊಮ್ಮನದು – ಮಂಕುತಿಮ್ಮ ॥ ೬೦ ॥ ನಕ್ಷತ್ರಮಂಡಲದಿನಾಚೆಯಿಂದೊಂದು ದನಿ ।
ವಕ್ಷೋಗುಹಾಂತರದಿನೊಂದು ದನಿಯಿಂತೀ ॥
ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ ।
ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ ॥ ೬೧ ॥ ಭೌತವಿಜ್ಞಾನಿ ರವಿತಾರೆಧರೆಗಳ ಚಲನ ।
ರೀತಿ ವೇಗವನೆಳೆದು ಶಕ್ತಿಗಳ ಗುಣಿಪನ್ ॥
ಪ್ರೀತಿ ರೋಷಗಳನವನಳೆವನೇನ್? ಅವ್ಯಕ್ತ ।
ಚೇತನವನರಿವನೇಂ? – ಮಂಕುತಿಮ್ಮ ॥ ೬೨ ॥ ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? ।
ಅರಿಯದದು ನಮ್ಮೆದೆಯ ಭಾವಗಳನೊರೆಯೆ ॥
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ।
ಒರಟುಯಾನವೊ ಭಾಷೆ – ಮಂಕುತಿಮ್ಮ ॥ ೬೩ ॥ ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ।
ಭತ್ತವದನು ವಿಚಾರಯುಕ್ತಿಗಳು ಕುಟ್ಟೆ ॥
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ।
ನಿತ್ಯ ಭೋಜನ ನಮಗೆ – ಮಂಕುತಿಮ್ಮ ॥ ೬೪ ॥ ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ ॥ ೬೫ ॥ ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? ।
ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ॥
ಕರ್ತನಾಲೋಚಿಸದ ದುಂದಿನವನೆಂಬ ನುಡಿ ।
ಯರ್ಧದೃಷ್ಟಿಯ ವಿವರ – ಮಂಕುತಿಮ್ಮ ॥ ೬೬ ॥ ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ ।
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ॥
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? ।
ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ ॥ ೬೭ ॥ ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವಿಲ್ಲಿ ।
ಎಲ್ಲಿ ಪರಿಪೂರಣವೊ ಅದನರಿಯುವನಕ ॥
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? ।
ಎಲ್ಲ ಬಾಳು ರಹಸ್ಯ – ಮಂಕುತಿಮ್ಮ ॥ ೬೮ ॥ ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? ।
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ॥
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ।
ಉಸಿರುತಿಹೆವದ ನಾವು – ಮಂಕುತಿಮ್ಮ ॥ ೬೯ ॥ ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ ।
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ॥
ಬಾವಿಗೂಟೆಯನಿತ್ತು ನರರೊಡಲ ಸೇರುವುದು ।
ದೈವ ರಸತಂತ್ರವಿದು – ಮಂಕುತಿಮ್ಮ ॥ ೭೦ ॥ ತರಣಿ ಕಿರಣದ ನಂಟು ಗಗನ ಸಲಿಲದ ನಂಟು ।
ಧರಣಿ ಚಲನೆಯ ನಂಟು ಮರುತನೊಳ್ನಂಟು ॥
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ ।
ಕಿರಿದು ಪಿರಿದೊಂದಂಟು – ಮಂಕುತಿಮ್ಮ ॥ ೭೧ ॥ ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು ।
ಅವನಾ ಬಂಧುತೆಯ ಜಡೆಯ ಬಿಡಿಸುವನು? ॥
ಜೀವ ಜೀವಕೆ ನಂಟು ಜಡ ಚೇತನಕೆ ನಂಟು ।
ಆವುದದಕಂಟಿರದು? – ಮಂಕುತಿಮ್ಮ ॥ ೭೨ ॥ ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ ।
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ॥
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ ।
ಒಂಟಿಸಿಕೊ ಜೀವನವ – ಮಂಕುತಿಮ್ಮ ॥ ೭೩ ॥ ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು ।
ಹೊಮ್ಮುವೆನು ಕೋಟಿರೂಪದಲಿ ನಾನೆಂದು ॥
ಬೊಮ್ಮನೆಳಸಿದನಂತೆ. ಆ ಯೆಳಸಿಕೆಯೆ ಮಾಯೆ ।
ನಮ್ಮಿರವು ಮಾಯೆಯಲಿ – ಮಂಕುತಿಮ್ಮ ॥ ೭೪ ॥ ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- ।
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ॥
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ ।
ನೊರೆ ಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ ॥ ೭೫ ॥ ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ ।
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ॥
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ ।
ವಿಹರಿಪನು ನಿರ್ಲಿಪ್ತ! – ಮಂಕುತಿಮ್ಮ ॥ ೭೬ ॥ ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ ।
ರನ್ನವೋ ಬ್ರಹ್ಮ; ನೋಡುವನು-ನಿಜಪಿಂಛ ॥
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು ।
ತನ್ಮಯನೊ ಸೃಷ್ಟಿಯಲಿ – ಮಂಕುತಿಮ್ಮ ॥ ೭೭ ॥ ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ ।
ಪರಕಿಸುತೆ ಮುಕರದಲಿ ಸೊಗಸುಗಳ ಪರಿಯ ॥
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ ।
ಮೆರೆಯುವನು ಪರಬೊಮ್ಮ – ಮಂಕುತಿಮ್ಮ ॥ ೭೮ ॥ ಬರೆವ ಹಲಗೆಯನೊಡೆದು ಬಾಲಕನು ತಾನದನು ।
ಮರಳಿ ಜೋಡಿಪೆನೆನ್ನುತಾಯಾಸಗೊಳುತ ॥
ಸರಿಚೌಕಗೈವಾಟದಲಿ ಜಗವ ಮರೆವಂತೆ ।
ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ ॥ ೭೯ ॥ ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ ।
ಆಟವಾಡುತಲಿ ತನ್ನೊರ್ ತನವ ಮೆರೆವಾ ॥
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ ।
ಪಾಟಿಯಲಿ ಮರೆತಿಹನು – ಮಂಕುತಿಮ್ಮ ॥ ೮೦ ॥ ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು ।
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ॥
ಅರಸಿಕೊಳುವವೊಲಿಹುದು; ದೊರೆತವೊಲ್ ತೋರೆ ಸುಖ ।
ದೊರೆವವರೆಗಾಯಸವೊ – ಮಂಕುತಿಮ್ಮ ॥ ೮೧ ॥ ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು ।
ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ॥
ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು ।
ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ ॥ ೮೨ ॥ ಮಾನಸವ ಚಿಂತೆವಿಡಿದಂದೊರ್ವನೆರಡಾಗಿ ।
ತಾನದಾರೊಳೊ ವಾದಿಸುವನಂತೆ ಬಾಯಿಂ ॥
ದೇನನೊ ನುಡಿಯುತ್ತ ಕೈಸನ್ನೆಗೈಯುವನು ।
ಭಾನವೊಂದರೊಳೆರಡು – ಮಂಕುತಿಮ್ಮ ॥ ೮೩ ॥ ಅಣು ಭೂತ ಭೂಗೋಲ ತಾರಾಂಬರಾದಿಗಳ ।
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ॥
ಕುಣಿಸುತಿರುವನು ತನ್ನ ಕೃತಿಕಂತುಕವನದರೊ ।
ಳಣಗಿದ್ದು ಪರಬೊಮ್ಮ – ಮಂಕುತಿಮ್ಮ ॥ ೮೪ ॥ ನಭದ ಬಯಲೊಳನಂತ, ಮನದ ಗುಹೆಯೊಳನಂತ ।
ವುಭಯದಾ ನಡುವೆ ಸಾದ್ಯಂತ ಜೀವಕಥೆ ॥
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ।
ಹಬೆಗುಳ್ಳೆಯೋ ಸೃಷ್ಟಿ – ಮಂಕುತಿಮ್ಮ ॥ ೮೫ ॥ ಗಗನ ತಲೆನವಿರಾಗೆ ಪರೆ ತಾರೆ ಹೂವಾಗೆ ।
ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ॥
ನಗುನಗುವ ಬೊಬ್ಬಿಡುವ ಜೀವತಾಂಡವ ರಸಿಕ ।
ಭಗವಂತ ಶಿವರುದ್ರ – ಮಂಕುತಿಮ್ಮ ॥ ೮೬ ॥ ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ ।
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ॥
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ ।
ವಿಲಸಿತವು ಬೊಮ್ಮನದು – ಮಂಕುತಿಮ್ಮ ॥ ೮೭ ॥ ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ ।
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ॥
ಥಳಥಳಕೆ ವಜ್ರದಲಿ ನೈಜವಿರುವಂತೆಯು ।
ಜ್ಜ್ವಲತೆ ಬೊಮ್ಮಗೆ ನೈಜ – ಮಂಕುತಿಮ್ಮ ॥ ೮೮ ॥ ಆದಿದಿವಸವದಾವುದೆಂದೆಂದುಮಿಹ ಜಗಕೆ? ।
ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ॥
ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ ।
ಸೇದಿಕೊಂಡಿರೆ ಲಯವೊ – ಮಂಕುತಿಮ್ಮ ॥ ೮೯ ॥ ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? ।
ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ॥
ಆವುದೆಲರಿನ ನಿಲ್ಲದಲೆತಕ್ಕೆ ಪಡುಸೀಮೆ? ।
ಈ ವಿಶ್ವಕಥೆಯಂತು – ಮಂಕುತಿಮ್ಮ ॥ ೯೦ ॥ ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ ।
ಸುಮವಪ್ಪುದಂತೆ ಮರುವಗಲು ಮುಗುಳ್ದಂತು ॥
ಅಮಿತ ಪ್ರಪಂಚನಾಕುಂಚನಾವರ್ತನ ।
ಕ್ರಮವೆ ವಿಶ್ವಚರಿತ್ರೆ – ಮಂಕುತಿಮ್ಮ ॥ ೯೧ ॥ ಎತ್ತಣಿನೊ ದೃಕ್ಷರಿಧಿಯಾಚೆಯಿಂದಲನಂತ ।
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ॥
ಬಿತ್ತರಿಸುತಿಹುದು ಹೊಸ ಹೊಸತನವನೆಡೆಬಿಡದೆ ।
ನಿತ್ಯನಿತ್ಯವು ಜಗದಿ – ಮಂಕುತಿಮ್ಮ ॥ ೯೨ ॥ ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ ।
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ॥
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ ।
ಲೊಲನಾಗಿರ್ಪನೆಲೊ – ಮಂಕುತಿಮ್ಮ ॥ ೯೩ ॥ ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ ।
ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ॥
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ ।
ಲೀಲಾಪ್ರಿಯಂ ಬ್ರಹ್ಮ – ಮಂಕುತಿಮ್ಮ ॥ ೯೪ ॥ ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ ।
ಸೋಮಶಂಕರನೆ ಭೈರವ ರುದ್ರನಂತೆ ॥
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ ।
ಪ್ರೇಮ ಘೋರಗಳೊಂದೆ! – ಮಂಕುತಿಮ್ಮ ॥ ೯೫ ॥ ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ ।
ಸತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ॥
ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ ।
ಕೃತ್ಯವಿದು ಬೊಮ್ಮನದು – ಮಂಕುತಿಮ್ಮ ॥ ೯೬ ॥ ಧರ್ಮವೆಂಬುದದೇನು? ಕರ್ಮವೆಂಬುದದೇನು? ।
ಬ್ರಹ್ಮಾಂಡಕಥೆಯೇನು? ಜೀವಿತವಿದೇನು? ॥
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ ।
ಬ್ರಹ್ಮವೇ ಜೀವನವೊ – ಮಂಕುತಿಮ್ಮ ॥ ೯೭ ॥ ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ ।
ಪ್ರಾಕೃತಧ್ವನಿಮಿಶ್ರವದರಡುಗೆ ರಾಗ ॥
ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ ।
ಜಾಗೃತಿಪ ಮತಿ ಧರ್ಮ – ಮಂಕುತಿಮ್ಮ ॥ ೯೮ ॥ ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ ।
ಚಲವೊಂದಚಲವೊಂದು ಸಮವದಸಮವಿದು ॥
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ ।
ಮಿಲಿತತೆಯಿನೀ ರುಚಿಯೊ – ಮಂಕುತಿಮ್ಮ ॥ ೯೯ ॥ ಅವಿದಿತಾಖಂಡಸತ್ತ್ವದಪಾರ ಜಲಧಿಯಲಿ ।
ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ॥
ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು ।
ವವಗುಂಠಿತ ಬ್ರಹ್ಮ – ಮಂಕುತಿಮ್ಮ ॥ ೧೦೦ ॥ ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು ।
ತೇಲುವುದಮೇಯಸತ್ತ್ವದಲಿ ಮೇಯ ಜಗ ॥
ಮೂಲದಶೆಯೊಳಗೊಂದು, ಮಾಪನದ ಬಗೆಗೆರಡು ।
ಗಾಳಿಯುಸಿರುಗಳಂತೆ – ಮಂಕುತಿಮ್ಮ ॥ ೧೦೧ ॥ ಕಾಯ ನಿರ್ಣೇಯವದರೊಳು ಮನವನಿರ್ಣೇಯ ।
ಸ್ನಾಯು ಸಂಖ್ಯೇಯ ಜೀವಳಮಸಂಖ್ಯೇಯ ॥
ಮೇಯಾಪ್ರಮೇಯಮಿಶ್ರಣವಿಂತು ನರಜಂತು ।
ನೇಯವದು ವಿಶ್ವಕಂ – ಮಂಕುತಿಮ್ಮ ॥ ೧೦೨ ॥ ಜ್ಞೇಯದ ದ್ವೀಪಕಜ್ಞೇಯಾಬ್ಧಿಯಾವರಣ ।
ಕಾಯಕದ ಗಿರಿಗೆ ಮಾನಸದಭ್ರಪಟಲ ॥
ಮೇಯವನು ಬಗೆದೇನ್ ಅಮೇಯ ಸುತ್ತಲುಮಿರಲು? ।
ಮಾಯೆಯೀ ಮಿಶ್ರಣವೊ – ಮಂಕುತಿಮ್ಮ ॥ ೧೦೩ ॥ ಕಾಲವಕ್ಷಯದೀಪವದರ ಪಾತ್ರೆಯಪಾರ ।
ಬಾಳ್ ಅದರಿನಾದೊಂದು ಕಿರುಹಣತೆ ಮಿಣಕು ॥
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು ।
ತೈಲಧಾರೆಯಖಂಡ – ಮಂಕುತಿಮ್ಮ ॥ ೧೦೪ ॥ ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು? ।
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು? ॥
ನಿತ್ಯ ಸತ್ತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ ।
ತತ್ತ್ವವೀ ಸಂಬಂಧ – ಮಂಕುತಿಮ್ಮ ॥ ೧೦೫ ॥ ಚೌಕಟ್ಟನಂತವದರೊಳು ಚಿತ್ರಪಟ ಸಾಂತ ।
ಸಾಕಾರ ಘನತತಿ ನಿರಾಕಾರ ನಭದಿ ॥
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ ।
ಲೆಕ್ಕ ತಾತ್ತ್ವಿಕನಿಗಿದು – ಮಂಕುತಿಮ್ಮ ॥ ೧೦೬ ॥ ಅಜ್ಞಾತವಾದುದನಭಾವವೆನೆ ನಾಸ್ತಿಕನು ।
ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ ॥
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।
ಸ್ವಜ್ಞಪ್ತಿಶೋಧಿ ಮುನಿ – ಮಂಕುತಿಮ್ಮ ॥ ೧೦೭ ॥ ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು ।
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ॥
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ ।
ಜಡವೆ ಜೀವದ ವಸತಿ – ಮಂಕುತಿಮ್ಮ ॥ ೧೦೮ ॥ ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ ।
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ॥
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ ।
ಬಲ ತೀವಿ ಚಲಿಪುದದು – ಮಂಕುತಿಮ್ಮ ॥ ೧೦೯ ॥ ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? ।
ಕ್ರಿಮಿಗೆ ಹಸಿವುಂಟಿನಿತು ಬೆದಕಾಟವುಂಟು ॥
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ ।
ಕ್ರಿಮಿಪಂಕ್ತಿ ಕಿರಿದಹುದೆ? – ಮಂಕುತಿಮ್ಮ ॥ ೧೧೦ ॥ ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ ।
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ॥
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ ।
ನೆಡೆವುದದು ಜೀವಿವೊಲು – ಮಂಕುತಿಮ್ಮ ॥ ೧೧೧ ॥ ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ – ಮಂಕುತಿಮ್ಮ ॥ ೧೧೨ ॥ ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ ।
ಗುಣಿಸುವನು ಭೂತಶಕ್ತಿಗಳನದರಿಂದೇಂ? ॥
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ ।
ವಣಗಿಹುದು ಮೂಲವದು – ಮಂಕುತಿಮ್ಮ ॥ ೧೧೩ ॥ ಸೃಷ್ಟಿರೂಪಂಗಳವತಾರದೊಳ್ ಕ್ರಮಲಕ್ಷ್ಯ ।
ಪುಷ್ಟವಾಗಿರ್ದೊಡೇನಿಲ್ಲದೊಡದೇನು? ॥
ಶಿಷ್ಟಮಾದುದು ಸತ್ತ್ವವದನು ಸೋಕದು ರೂಪ ।
ದೃಷ್ಟಿ ಸತ್ತ್ವದೊಳಿರಲಿ – ಮಂಕುತಿಮ್ಮ ॥ ೧೧೪ ॥ ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ ।
ಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ॥
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ ।
ಸಮಸದದು ಸತ್ತ್ವವನು – ಮಂಕುತಿಮ್ಮ ॥ ೧೧೫ ॥ ಪರಮಾಣುಮಿಂ ಪ್ರಪಂಚಗಳ ಸಂಯೋಜಿಪುದು ।
ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ॥
ಚರಲೀಲೆಯಲಿ ಜೀವವೆನಿಪ ಚೈತನ್ಯವದು ।
ಪರಸತ್ತ್ವ ಶಕ್ತಿಯಲೊ – ಮಂಕುತಿಮ್ಮ ॥ ೧೧೬ ॥ ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ? ।
ಆಪಾದಶಿರವುಮದು ತುಂಬಿರುವುದಲ್ತೆ? ॥
ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ ।
ಲೇಪಗೊಳ್ಳದ ಸತ್ತ್ವ – ಮಂಕುತಿಮ್ಮ ॥ ೧೧೭ ॥ ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ ।
ಭುವನಪೋಷಣೆಯುಭಯ ಸಹಕಾರದಿಂದ ॥
ವಿವಿಧ ಶಕ್ತಿರಸಂಗಳೇಕೀಭವಿಸೆ ಜೀವ ।
ಅವಿತರ್ಕ್ಯ ಸೂಕ್ಷ್ಮವದು – ಮಂಕುತಿಮ್ಮ ॥ ೧೧೮ ॥ ನಾವುಣ್ಣುವನ್ನಗಳು ನಾವು ಕುಡಿವುದಕಗಳು ।
ನಾವುಸಿರುವೆಲರುಗಳು ನಾವುಡುವ ವಸ್ತ್ರ ॥
ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು ।
ಜೀವವೆರಡರ ಶಿಶುವು – ಮಂಕುತಿಮ್ಮ ॥ ೧೧೯ ॥ ಪಾಕ ನಿನ್ನೊಳದೊಂದು ಸಾಗುತಿಹುದೆಡೆಬಿಡದೆ ।
ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ॥
ಸಾಕುಬೇಕುಗಳೆಲ್ಲವದರಿನಾ ಯಂತ್ರವನು ।
ಏಕೆ ರಚಿಸಿದನೊ ವಿಧಿ! – ಮಂಕುತಿಮ್ಮ ॥ ೧೨೦ ॥ ತನುವೇನು? ಮನವೇನು? ಪರಮಾಣು ಸಂಧಾನ ।
ಕುಣಿಸುತಿಹುದುಭಯವನು ಮೂರನೆಯದೊಂದು ॥
ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು ।
ದಣಿಯದದನರಸನು ನೀಂ – ಮಂಕುತಿಮ್ಮ ॥ ೧೨೧ ॥ ಜನಿಸಿದುದು ಮೃತಿಯನೆಳಸದೆ ಕುಲವ ಬೆಳಸುವುದು ।
ಒಣಗಿದಂತಿರುವ ತೃಣಮೂಲ ಮೊಳೆಯುವುದು ॥
ಮನುಜರಳಿವರು ಮನುಜಸಂತಾನ ನಿಂತಿಹುದು ।
ಅಣಗದಾತ್ಮದ ಸತ್ತ್ವ – ಮಂಕುತಿಮ್ಮ ॥ ೧೨೨ ॥ ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು ।
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ॥
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು ।
ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ ॥ ೧೨೩ ॥ ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ ।
ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ॥
ಎನೊ ಎಂತೋ ಸಮಾಧಾನಗಳನರಸುತಿಹ ।
ನಾನಂದವಾತ್ಮಗುಣ – ಮಂಕುತಿಮ್ಮ ॥ ೧೨೪ ॥ ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ ।
ಬಚ್ಚಿಡುವುದದನು ಜೀವಿತೆಯ ಮಾಯಿಕತೆ॥
ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ ।
ನಿಚ್ಚವಿಳೆಯಾಲೆಮನೆ – ಮಂಕುತಿಮ್ಮ ॥ ೧೨೫ ॥ ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ ।
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ॥
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ ।
ಪರಬೊಮ್ಮನೆನ್ನುವರು – ಮಂಕುತಿಮ್ಮ ॥ ೧೨೬ ॥ ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ ।
ಭುವನಜೀವನಜಲಧಿಯೂರ್ಮಿಕೋಟಿಯಲಿ ॥
ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು ।
ಸವಿ ನಮ್ಮದದರ ಕಣ – ಮಂಕುತಿಮ್ಮ ॥ ೧೨೭ ॥ ಹೊರಗಾವುದೊಳಗಾವುದೀ ಸೃಷ್ಟಿಚಕ್ರದಲಿ ।
ಎರಡನೊಂದಾಗಿಪುದು ಹರಿವ ನಮ್ಮುಸಿರು ॥
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ ।
ಬರಿ ಸುಷಿರಪಿಂಡ ಜಗ – ಮಂಕುತಿಮ್ಮ ॥ ೧೨೮ ॥ ಧರೆಯ ನೀರ್ಗಾಗಸದ ನೀರಿಳಿದು ಬೆರವಂತೆ ।
ನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತು ॥
ಪರಿವುದೀ ವಿಶ್ವಜೀವನಲಹರಿಯನವರತ ।
ಚಿರಪ್ರತ್ನನೂತ್ನ ಜಗ – ಮಂಕುತಿಮ್ಮ ॥ ೧೨೯ ॥ ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ ।
ವ್ಯೋಮದೆ ಭಗೀರಥಂ ತಂದ ಸುರತಟಿನಿ ॥
ಸೋಮನಂ ಪೆತ್ತ ಕಡಲೀ ಪುರಾತನಗಳಿರೆ ।
ನಾಮೆಂತು ಹೊಸಬರೆಲೊ – ಮಂಕುತಿಮ್ಮ ॥ ೧೩೦ ॥ ಪುಲಿ ಸಿಂಗದುಚ್ಛ್ವಾಸ,ಹಸು ಹುಲ್ಲೆ ಹಯದುಸಿರು ।
ಹುಳು ಹಾವಿಲಿಯ ಸುಯ್ಲು, ಹಕ್ಕಿ ಹದ್ದುಯ್ಲು ॥
ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ ।
ಕಲಬರಿಕೆ ಜಗದುಸಿರು – ಮಂಕುತಿಮ್ಮ ॥ ೧೩೧ ॥ ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? ।
ರಾಮನುಂ ದಶಕಂಠನೆಲರನುಸಿರಿರನೆ? ॥
ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? ।
ಭೂಮಿಯಲಿ ಪೊಸತೇನೊ? – ಮಂಕುತಿಮ್ಮ ॥ ೧೩೨ ॥ ಬಹಿರಂತರಗಳೊಂದು ಭೂತಭವ್ಯಗಳೊಂದು ।
ಇಹಪರಂಗಳುಮೊಂದು ಚೈತನ್ಯವೊಂದು ॥
ಬಹುಪಾತ್ರನಾಟಕದಿ ಮಾಯೆ ಶತವೇಷಗಳ ।
ವಹಿಸಲೀವಳು ಪತಿಗೆ – ಮಂಕುತಿಮ್ಮ ॥ ೧೩೩ ॥ ಏಕದಿಂದಲನೇಕ ಮತ್ತನೇಕದಿನೇಕ ।
ವೀ ಕ್ರಮವೆ ವಿಶ್ವದಂಗಾಂಗಸಂಬಂಧ ॥
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ ।
ಸಾಕಲ್ಯದರಿವಿರಲಿ – ಮಂಕುತಿಮ್ಮ ॥ ೧೩೪ ॥ ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ ।
ಕಂಪಿಸುವ ಕೇಂದ್ರ ನೀಂ ಬ್ರಹ್ಮಕಂದುಕದಿ ॥
ಶಂಪಾತರಂಗವದರೊಳು ತುಂಬಿ ಪರಿಯುತಿದೆ ।
ದಂಭೋಳಿ ನೀನಾಗು – ಮಂಕುತಿಮ್ಮ ॥ ೧೩೫ ॥ ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ ।
ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ॥
ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ ।
ಪುಷ್ಪವಾಗಿರು ನೀನು – ಮಂಕುತಿಮ್ಮ ॥ ೧೩೬ ॥ ನಾನೆನುವವನೆ ವಿಶ್ವಚಕ್ರನಾಭಿಯವಂಗೆ ।
ಕಾಣಬಹ ದಿಗ್ವಲಯ ಚಕ್ರನೇಮಿಪಥ ॥
ಅನಂತ್ಯವೀ ಜಗಚ್ಚಕ್ರನಾಭಿಕ್ರಮತೆ ।
ತಾನೊಂದೆ ಸತ್ತ್ವವದು – ಮಂಕುತಿಮ್ಮ ॥ ೧೩೭ ॥ ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳಿಗೆ ।
ನಾನೆನುವ ಚೇತನದಿ ರೂಪಗೊಂಡಿಹುದೊ? ॥
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ ।
ಬಾನಾಚೆ ಹಬ್ಬಿಹುದೊ? – ಮಂಕುತಿಮ್ಮ ॥ ೧೩೮ ॥ ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ ।
ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ॥
ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ ।
ಸತ್ಯ ಜಗದಲಿ ಕಾಣೊ – ಮಂಕುತಿಮ್ಮ ॥ ೧೩೯ ॥ ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥ ೧೪೦ ॥ ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು ।
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ॥
ಹಳೆಯವಿವು ನೀನದರೊಳಾವುದನು ಕಳೆದೀಯೊ? ।
ಹಳದು ಹೊಸತರೊಳಿರದೆ? – ಮಂಕುತಿಮ್ಮ ॥ ೧೪೧ ॥ ಮೂಲವಸ್ತುವದೊಂದು ಲೀಲೆಗೋಸುಗ ನೂರು ।
ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ॥
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮಸಾಮ್ಯವ ತಾಳಿ ।
ಆಳುತಿರು ಜೀವನವ – ಮಂಕುತಿಮ್ಮ ॥ ೧೪೨ ॥ ಧಾತ್ರಿಯನು ಮದುವೆಮಂಟಪದವೊಲು ಸಿಂಗರಿಸಿ ।
ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ॥
ಕೃತ್ರಿಮವನೆಡೆಬಿಡದೆ ನೆಡಸಿ ನಗುವ ವಿಲಾಸಿ ।
ಚಿತ್ರಕಾರಿಯೊ ಮಾಯೆ – ಮಂಕುತಿಮ್ಮ ॥ ೧೪೩ ॥ ವಾಯುವಂ ಕಾಣ್ಬನಾರ್? ತತ್ಕ್ರಿಯೆಯ ಕಾಣನಾರ್? ।
ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ ॥
ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ ।
ದೇಯಾರ್ಥಿಯೊಲು ನೀನು – ಮಂಕುತಿಮ್ಮ ॥ ೧೪೪ ॥ ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? ।
ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ॥
ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು ।
ತಾಯವಳು ನೀಂ ಮಗುವು – ಮಂಕುತಿಮ್ಮ ॥ ೧೪೫ ॥ ರಾಯ ಮುದಿದಶರಥನಾಡಿಸುತ ಕೈಕೇಯಿ ।
ಸ್ವೀಯ ವಶದಲಿ ಕೋಸಲವನಾಳಿದಂತೆ ॥
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ ।
ಕಾಯುವಳು ತನ್ನಿಚ್ಛೆ – ಮಂಕುತಿಮ್ಮ ॥ ೧೪೬ ॥ ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ ।
ಮಾಯಿಪಳು ಗಾಯಗಳನೀವಳಿಷ್ಟಗಳ ॥
ಮೈಯ ನೀಂ ಮರೆಯೆ ನೂಕುವಳಾಗ ಪಾತಾಳಕೆ ।
ಪ್ರೇಯ ಪೂತನಿಯವಳು – ಮಂಕುತಿಮ್ಮ ॥ ೧೪೭ ॥ ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? ।
ಸ್ವಕೃತಿಯೆಂದವನೆನುವುದವಳಿರದೊಡಿರದು ॥
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ ।
ವಿಕೃತಿಗೆಡೆಯಾಗದಿರೊ – ಮಂಕುತಿಮ್ಮ ॥ ೧೪೮ ॥ ಅರಸನೊಬ್ಬನಲ್ಲ; ಮೂವರು ಬಾಳನಾಳುವರು ।
ನರ ಕರುಮ ದೈವಗಳು; ತೊಡಕದಕೆ ಸಾಜ ॥
ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ ।
ಸರಿಯೇನೊ ತಪ್ಪೇನೊ? – ಮಂಕುತಿಮ್ಮ ॥ ೧೪೯ ॥ ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು ।
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ॥
ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ ।
ಪರಿವೆಯೇನಿಲ್ಲೆಲವೊ – ಮಂಕುತಿಮ್ಮ ॥ ೧೫೦ ॥ ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ ।
ಜೀವವಾಸನೆಗಳಲಿ ಪೂರ್ವಕೃತವೆನಿಸಿ ॥
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ ।
ತ್ರೈವಿಧದೊಳಿರುತಿಹುದು – ಮಂಕುತಿಮ್ಮ ॥ ೧೫೧ ॥ ಪುಣ್ಯಪಾಪ ಋಣಾನುಬಂಧ ವಾಸನೆಗಳಿವು ।
ಜನ್ಮಾಂತರದ ಕರ್ಮಶೇಷದಂಶಗಳು ॥
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು ।
ಸನ್ನಿಹಿತ ದೈವಿಕದೆ – ಮಂಕುತಿಮ್ಮ ॥ ೧೫೨ ॥ ಪ್ರಾರಾಬ್ಧಕರ್ಮಮುಂ ದೈವಿಕದ ಲೀಲೆಯುಂ ।
ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ॥
ಆರುಮಳೆವವರಿಲ್ಲವವುಗಳಾವೇಗಗಳ ।
ಪೌರುಷವು ನವಸತ್ತ್ವ – ಮಂಕುತಿಮ್ಮ ॥ ೧೫೩ ॥ ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ ।
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ॥
ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ ।
ಪೊಸತಾಗಿಪುದು ಜಗವ – ಮಂಕುತಿಮ್ಮ ॥ ೧೫೪ ॥ ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು ।
ತುಸಿರಾಗಿ ನಮ್ಮೊಳಾವಗಮಾಡುವಂತೆ ॥
ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ ।
ಮ್ಮಸುಗಳೊಳವೊಗುತಿಹುದು – ಮಂಕುತಿಮ್ಮ ॥ ೧೫೫ ॥ ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ।
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ॥
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ ।
ಬಾಯ ಚಪ್ಪರಿಸುವನು – ಮಂಕುತಿಮ್ಮ ॥ ೧೫೬ ॥ ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ ।
ನರಜಾತಿ ಸಾನುಭೂತಿಯ ಕಲಿಯಲೆಂದು ॥
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನಿತ್ತೆ ।
ಬೆರೆ ನೀನು ವಿಶ್ವದಲಿ – ಮಂಕುತಿಮ್ಮ ॥ ೧೫೭ ॥ ಕರವೆದಡದೃಷ್ಟಕ್ಕೆ; ನರನ ಪೂರ್ವಿಕವೊಂದು ।
ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ॥
ಧರಿಸಿಹುದು ಮನುಜಜೀವಿತವನದರೊತ್ತಡದೆ ।
ಪರಿದಾಟ ನಮಗೆಲ್ಲ – ಮಂಕುತಿಮ್ಮ ॥ ೧೫೮ ॥ ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ ।
ಭೂಪಟದಿ ಜೀವರಸಗಳ ಪಚಿಸುವಂತೆ ॥
ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ ।
ವೇಪಿಪನು ವಿಧಿ ನಮ್ಮ – ಮಂಕುತಿಮ್ಮ ॥ ೧೫೯ ॥ ಆವ ಬೇಳೆಯದಾವ ನೀರಿನಲಿ ಬೇಯುವುದೊ! ।
ಆವ ಜೀವದ ಪಾಕವಾವ ತಾಪದಿನೋ! ॥
ಆ ವಿವರವನು ಕಾಣದಾಕ್ಷೇಪಣೆಯದೇನು? ।
ದೈವಗುಟ್ಟದು ತಿಳಿಯೆ – ಮಂಕುತಿಮ್ಮ ॥ ೧೬೦ ॥ ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? ।
ಬೆದರಿಕೆಯನದರಿಂದ ನೀಗಿಪನು ಸಖನು ॥
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ ।
ವಿಧಿಯಗಸ, ನೀಂ ಕತ್ತೆ – ಮಂಕುತಿಮ್ಮ ॥ ೧೬೧ ॥ ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ ।
ಜಗಳವಾಡಿಸಿ ದೈವಜೀವಗಳ ಪೆಸರಿಂ ॥
ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! ।
ಬಿಗಿಯದಿರು ನೀಂ ಬೀಗಿ – ಮಂಕುತಿಮ್ಮ ॥ ೧೬೨ ॥ ಮನುಷ್ಯಚರಿತೆಯಚ್ಛಿನ್ನವಾಹಿನಿ ಸಾಗ ।
ಲಾನುಪೂರ್ವ್ಯದ ಕರ್ಮಋಣಶೇಷವಿನಿತು ॥
ತಾನಿರಲೆಬೇಕಲ್ತೆ ಪೌರುಷಸ್ಪರ್ಧನೆಗೆ ।
ಆನೆಗಂಕುಶದಂತೆ – ಮಂಕುತಿಮ್ಮ ॥ ೧೬೩ ॥ ಹಳಯ ಮಲೆ ಹಳೆಯ ನೆಲವಾದೊಡೆಯುಮೊರತೆ ಮಳೆ ।
ಹೊಳೆನೀರನಾವಗಂ ಪೊಸದಾಗಿಸುವವೊಲ್ ॥
ಹಳೆಯ ಕರ್ಮವ ಹೊಸದು ಕೊಚ್ಚಿ ಪೌರುಷನದಿಯ ।
ಬೆಳೆಯಿಪುದು ನವತೆಯಲಿ – ಮಂಕುತಿಮ್ಮ ॥ ೧೬೪ ॥ ಹೊಸಹೊಸದು ತಾನಾಗುತಿರ್ದೊಡಂ ತನ್ನಯ ।
ಪ್ರಸವ ಪ್ರವಾಹ ಭೂಮಿಗಳ ಹಳತನದಿಂ ॥
ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ? ।
ಹೊಸದು ಹಳದಾಗದೇ – ಮಂಕುತಿಮ್ಮ ॥ ೧೬೫ ॥ ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ ।
ಕಡಲೊಳೆತ್ತಲೊ ಹೊಸದ್ವೀಪವೇಳುವುದು ॥
ಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ ।
ಅಳಿವಿಲ್ಲ ವಿಶ್ವಕ್ಕೆ – ಮಂಕುತಿಮ್ಮ ॥ ೧೬೬ ॥ ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು ।
ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ॥
ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ ।
ಅತಿಚರಿತೆ ಪ್ರಕೃತಿಯಲಿ – ಮಂಕುತಿಮ್ಮ ॥ ೧೬೭ ॥ ಅನುಬಂಧ ಜೀವಜೀವಕೆ ಪುರಾಕೃತದಿಂದ ।
ಮನದ ರಾಗದ್ವೇಷವಾಸನೆಗಳದರಿಂ ॥
ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು ।
ಕೊನೆಯಿರದ ಬಲೆಯೊ ಅದು – ಮಂಕುತಿಮ್ಮ ॥ ೧೬೮ ॥ ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ ।
ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ॥
ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ ।
ಕುಣಿವ ಗರ್ದಭ ನೀನು – ಮಂಕುತಿಮ್ಮ ॥ ೧೬೯ ॥ ಉಣುವುದುಡುವುದು ಪಡುವುದಾಡುವುದು ಮಾಡುವುದು ।
ಋಣಗಳೆಲ್ಲವು ಪೂರ್ವಸಂಚಿತಾಂಶಗಳು ॥
ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ ।
ಗೊಣಗಾಟವಳಿಸುವುದೆ? – ಮಂಕುತಿಮ್ಮ ॥ ೧೭೦ ॥ ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ ।
ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ ॥
ಇಂದು ಬರಿಯುಪವಾಸ, ನಾಳೆ ಪಾರಣೆ – ಯಿಂತು ।
ಸಂದಿರುವುದನ್ನ ಋಣ – ಮಂಕುತಿಮ್ಮ ॥ ೧೭೧ ॥ ಅರಿ ಮಿತ್ರ ಸತಿ ಪುತ್ರ ಬಳಗವದೆಲ್ಲ ।
ಕರುಮದವತಾರಗಳೊ, ಋಣಲತೆಯ ಚಿಗುರೋ ॥
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ।
ವುರಿಮಾರಿಯಾದೀತೊ – ಮಂಕುತಿಮ್ಮ ॥ ೧೭೨ ॥ ಬಂಧುಬಳಗವುಮಂತಕನ ಚಮುವೊ, ಛದ್ಮಚಮು ।
ದಂದುಗದ ಬಾಗಿನಗಳವರ ನಲುಮೆಗಳು ॥
ಕುಂದಿಪ್ಪುವಾತ್ಮನನವರ್ಗಳುಪಕಾರಗಳು ।
ಮಂದಿಗಾಗದಿರು ಬಲಿ – ಮಂಕುತಿಮ್ಮ ॥ ೧೭೩ ॥ ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? ।
ಹೊಂದಿರುವರವರ್ ಅಹಂತೆಯು ಮೊಳೆಯುವನಕ ॥
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? ।
ಬಂಧ ಮುರಿವುದು ಬಳಿಕ – ಮಂಕುತಿಮ್ಮ ॥ ೧೭೪ ॥ ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ ।
ಯಕ್ಷಿಯರು ಮ್ಯಾಕ್ ಬೆತನಿಗೆಸಗಿದುಪದೇಶ ॥
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? ।
ಅಕ್ಷಿ ನಿರ್ಮಲವೇನೊ? – ಮಂಕುತಿಮ್ಮ ॥ ೧೭೫ ॥ ಇಂಗಿತಜ್ಞಾನವಿಲ್ಲದ ಬಂಧುಪರಿವಾರ ।
ಹಂಗಿಸುವ ಛಲವುಳ್ಳ ಸತಿಪುತ್ರಸಖರು ॥
ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ ।
ಮಂಗಬುದ್ಧಿಯ ಜನರು – ಮಂಕುತಿಮ್ಮ ॥ ೧೭೬ ॥ ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ ।
ದಂಡಧರನೋಲಗಕೆ ನಿನ್ನನೆಳೆವವರೋ ॥
ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ ।
ಮಂದಹಸಿತದ ಕೊಲೆಯೊ – ಮಂಕುತಿಮ್ಮ ॥ ೧೭೭ ॥ ದ್ವೇಷ ರೋಷಗಳವೊಲೆ ನೇಹಮುಂ ಮೋಹಮುಂ ।
ಪಾಶವಾಗಲ್ಬಹುದು ನಿನಗೆ ಮೈಮರಸಿ ॥
ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ ।
ಮೋಸದಲಿ ಕೊಲ್ಲುವುವೊ – ಮಂಕುತಿಮ್ಮ ॥ ೧೭೮ ॥ ಕರುಮ ಬಂದಿದಿರಹುದು ಮೋಹನದ ರೂಪಿನಲಿ ।
ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ॥
ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ ।
ತರಳತೆಯದೇಂ ತಂತ್ರ? – ಮಂಕುತಿಮ್ಮ ॥ ೧೭೯ ॥ ಮೃತ್ಯು ತಾಂ ಬಂದು ಮೋಹಿನಿಯರೂಪದಿ ನಿನ್ನ ।
ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ॥
ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ ।
ಹತ್ಯೆಯಲಿ ಹರುಷಿಪಳೊ – ಮಂಕುತಿಮ್ಮ ॥ ೧೮೦ ॥ ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ ।
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ॥
ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ ।
ವಣುವಣುವೆ ಬಿಗಿಯುವುವೊ – ಮಂಕುತಿಮ್ಮ ॥ ೧೮೧ ॥ ಋಣದ ಜಾಲವನಂತ, ಕರುಮಚಕ್ರವನಂತ ।
ಜನುಮಜನುಮದ ಕಥೆಯ ತಂತುಗಳನಂತ ॥
ಅನವರತ ನೂತನವಿದೆನಿಪ ವಿಶ್ವದ ತಂತ್ರ ।
ಬಿನದ ಪರಬೊಮ್ಮಂಗೆ – ಮಂಕುತಿಮ್ಮ ॥ ೧೮೨ ॥ ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ ।
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ॥
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು ।
ಧನ್ಯನುಭಯವ ಮೀರೆ – ಮಂಕುತಿಮ್ಮ ॥ ೧೮೩ ॥ ನೋಡುನೋಡುತ ಲೋಕಸಹವಾಸ ಸಾಕಹುದು ।
ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ ॥
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ ।
ನೋಡಾಡು ಹಗುರದಿಂ – ಮಂಕುತಿಮ್ಮ ॥ ೧೮೪ ॥ ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? ।
ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ ॥
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ ।
ಬದುಕಿನಲಿ ತಿರುಳೇನು? – ಮಂಕುತಿಮ್ಮ ॥ ೧೮೫ ॥ ತಡಕಾಟ ಬದುಕೆಲ್ಲವೇಕಾಕಿಜೀವ ತ ।
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ॥
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ ।
ಮಡುವೊಳೋಲಾಡುತ್ತೆ – ಮಂಕುತಿಮ್ಮ ॥ ೧೮೬ ॥ ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ ।
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ॥
ಬಿಡಿಜೀವ ಸಂಗಾತಿಜೀವಗಳನರಸಿ ತಾಂ ।
ಪಡೆದಂದು ಪೂರ್ಣವದು – ಮಂಕುತಿಮ್ಮ ॥ ೧೮೭ ॥ ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ ।
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ ॥
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು ।
ವಶನಾಗದಿಹ ನರನು? – ಮಂಕುತಿಮ್ಮ ॥ ೧೮೮ ॥ ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ ।
ಪರಿಪರಿಯ ಫಲಮಧುರಗಳ ರಸನೆಗುಣಿಪ ॥
ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ ।
ಗುರು ಸೃಷ್ಟಿ ರಸಿಕತೆಗೆ – ಮಂಕುತಿಮ್ಮ ॥ ೧೮೯ ॥ ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ ।
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ ॥
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು ।
ಕಮ್ರತೆಯೊ ನಮ್ರತೆಯೊ? – ಮಂಕುತಿಮ್ಮ ॥ ೧೯೦ ॥ ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನು ।
ತಡಕುವನು; ತನ್ನಾತ್ಮದುಣಿಸ ಮರೆಯುವನು ॥
ಒಡಲಿನಬ್ಬರವೇನು? ಆತ್ಮದ ನಾಣ್ಚೇನು? ।
ಪೊಡವಿಗಿದೆ ದುಮ್ಮಾನ – ಮಂಕುತಿಮ್ಮ ॥ ೧೯೧ ॥ ದೇವದಾನವರ ರಣರಂಗ ಮಾನವಹೃದಯ ।
ಭಾವ ರಾಗ ಹಠಂಗಳವರ ಸೇನೆಗಳು ॥
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು ।
ಜೀವಾಮೃತವನವರು – ಮಂಕುತಿಮ್ಮ ॥ ೧೯೨ ॥ ಪರಮೇಷ್ಠಿ ನಿಜಚಾತುರಿಯನಳೆಯ ನಿರವಿಸಿದ ।
ನೆರಡುಕೈಯಿಂದೆರಡು ಜಂತುಗಳ ಬಳಿಕ ॥
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು ।
ನರಿಯು ವಾನರವು ನರ – ಮಂಕುತಿಮ್ಮ ॥ ೧೯೩ ॥ ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? ।
ಅಂತರಗಭೀರಗಳ ತಾನೆ ಕಂಡವನಾರ್? ॥
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ ।
ಸ್ವಂತಕೇ ದುರ್ದರ್ಶ – ಮಂಕುತಿಮ್ಮ ॥ ೧೯೪ ॥ ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ॥
ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು – ಮಂಕುತಿಮ್ಮ ॥ ೧೯೫ ॥ ಮನುಜಲೋಕವಿಕಾರಗಳನು ನೀನಳಿಸುವೊಡೆ ।
ಮನಕೊಂದು ದರ್ಪಣವ ನಿರವಿಸೆಂತಾನುಂ ॥
ಅನುಭವಿಪರವರಂದು ತಮ್ಮಂತರಂಗಗಳ ।
ಅನುಪಮಾಸಹ್ಯಗಳ – ಮಂಕುತಿಮ್ಮ ॥ ೧೯೬ ॥ ಕನಲ್ದ ಹುಲಿ ಕೆರಳ್ದ ಹರಿ ಮುಳ್ ‍ಕರಡಿ ಛಲನಾಗ ।
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ॥
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ ।
ವಣಗಿಹುವು ನರಮನದಿ – ಮಂಕುತಿಮ್ಮ ॥ ೧೯೭ ॥ ಸತ್ಯವಂತನನರಸಲೆನುತ ಪೇಟೆಗಳೊಳಗೆ ।
ಹುಟ್ಟಹಗಲೊಳೆ ದೀವಿಗೆಯ ಹಿಡಿದು ನೆಡೆದು ॥
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು ।
ತಾತ್ತ್ವಿಕ ಡಯೋಜೆನಿಸ್ – ಮಂಕುತಿಮ್ಮ ॥ ೧೯೮ ॥ ಪದರಪದರಗಳಿಹುವು ಗಂಟುಗಂಟುಗಳಿಹುವು ।
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ॥
ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? ।
ವಿಧಿಯ ಕೈಚಿತ್ರವದು – ಮಂಕುತಿಮ್ಮ ॥ ೧೯೯ ॥ ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ ।
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ॥
ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ ।
ದಿಟ್ಟಿಸುತ ಕರುಬುವೆಯೊ – ಮಂಕುತಿಮ್ಮ ॥ ೨೦೦ ॥ ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? ।
ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? ।
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ ॥ ೨೦೧ ॥ ರಾವಣನ ದಶಶಿರವದೇಂ? ನರನು ಶತಶಿರನು ।
ಸಾವಿರಾಸ್ಯಗಳನೊಂದರೊಳಣಗಿಸಿಹನು ॥
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ ।
ಭೂವ್ಯೊಮಕತಿಶಯನು – ಮಂಕುತಿಮ್ಮ ॥ ೨೦೨ ॥